ವೆಂಕಟರಾಮಯ್ಯ, ಸಿ ಕೆ
 	1896-1973. ಹೆಸರಾಂತ ಕನ್ನಡ ವಿದ್ವಾಂಸರು. ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಪೊಟ್ಳು ಎಂಬ ಗ್ರಾಮದಲ್ಲಿ. ತಂದೆ ಕೃಷ್ಣಪ್ಪ, ತಾಯಿ ನಂಜಮ್ಮ. ಆರಂಭದ ಶಿಕ್ಷಣವನ್ನು ಪೊಟ್ಳು, ಚನ್ನಪಟ್ಟಣ ಮತ್ತು ಮಾಗಡಿಗಳಲ್ಲಿ ಮುಗಿಸಿದ ಇವರು, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಯನ್ನು ಪಡೆದರು. ಅನಂತರ ಮುಂಬಯಿಯಲ್ಲಿ ವ್ಯಾಸಂಗಮಾಡಿ ಎಂ.ಎ. ಪದವಿಯ ಜೊತೆಗೆ ಎಲ್‍ಎಲ್.ಬಿ. ಪದವಿಯನ್ನು ಗಳಿಸಿಕೊಂಡರು. ಶ್ರೀರಂಗಪಟ್ಟಣದಲ್ಲಿ ಸ್ವಲ್ಪಕಾಲ ವಕೀಲವೃತ್ತಿಯನ್ನು ನಡೆಸಿದ ಇವರು ಆಗಿನ ಮೈಸೂರು ಸರ್ಕಾರ ಏರ್ಪಡಿಸಿದ ಭಾಷಾಂತರ ಸ್ಪರ್ಧಾಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಹೊಂದಿ  ಸರ್ಕಾರದ ಭಾಷಾಂತರಕಾರರಾಗಿ ನೇಮಕಗೊಂಡು (1924) ದೀರ್ಘಕಾಲ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಆ ಹುದ್ದೆಯಿಂದ ನಿವೃತ್ತರಾದ ಮೇಲೆ ಆಗತಾನೆ ಸರ್ಕಾರ ಆರಂಭಿಸಿದ್ದ ಸಾಹಿತ್ಯ ಮತ್ತು ಸಂಸ್ಕøತಿ ಅಭಿವೃದ್ಧಿ ಇಲಾಖೆಯ ಮೊಟ್ಟಮೊದಲನೆಯ ನಿರ್ದೇಶಕರಾಗಿ (1951-55) ನೇಮಕಗೊಂಡು, ಸೇವೆ ಸಲ್ಲಿಸಿ ವಿಶ್ರಾಂತಿ ಪಡೆದರು.

	ಕನ್ನಡ, ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯ ಗಳಿಸಿಕೊಂಡಿದ್ದ ಇವರು ಮಾಡಿರುವ ಸಾಹಿತ್ಯಸೇವೆ ಗಣ್ಯವಾದುದು. ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯದಲ್ಲಿ ಆಸಕ್ತಿ ವಹಿಸಿದ್ದ ಇವರು ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ, ಅಲ್ಲಿ ತಮ್ಮ ಗುರುಗಳಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿಗಳ ಪ್ರಭಾವಕ್ಕೆ ಒಳಗಾಗಿ ಅವರಿಂದ ಕನ್ನಡ ದೀಕ್ಷೆಯನ್ನು ಪಡೆದರು. ಪ್ರಾರಂಭದಲ್ಲಿ ಇಂಗ್ಲಿಷ್‍ನಿಂದ ಕೆಲವು ಕಾದಂಬರಿಗಳನ್ನು ಕನ್ನಡಕ್ಕೆ ತಂದರು. 1917ರಲ್ಲಿ ಮೈಸೂರು ವಿಶ್ವವಿದ್ಯಾ ನಿಲಯ ಏರ್ಪಡಿಸಿದ್ದ ಗ್ರಂಥ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಿತರಾದ ಇವರು ಅಲ್ಲಿಂದ ಮುಂದಕ್ಕೆ ಅನೇಕ ಕೃತಿಗಳನ್ನು ಬರೆದು ಪ್ರಕಟಿಸಿದರು. ಇವರ ಕೆಲವು ಮುಖ್ಯ ಕೃತಿಗಳಿವು : ಹಳ್ಳಿಯ ಕಥೆಗಳು, ತುರಾಯಿ-ಇವು ಸಣ್ಣ ಕಥೆಗಳ ಸಂಗ್ರಹಗಳು; ಬುದ್ಧ, ಪೈಗಂಬರ್, ಲಿಂಕನ್, ಹರ್ಷವರ್ಧನ, ಆಳಿದ ಮಹಾಸ್ವಾಮಿಯವರು-ಇವು ಜೀವನಚರಿತ್ರೆಗಳು; ಸುಂದರಿ, ನಮ್ಮ ಸಮಾಜ, ಮಂಡೋದರಿ, ನಚಿಕೇತ ಮತ್ತು ಬ್ರಹ್ಮವಾದಿ -ಇವು ನಾಟಕಗಳು. ಈ ನಾಟಕಗಳೆಲ್ಲ ರಂಗದ ಮೇಲೆ ಯಶಸ್ವೀ ಪ್ರಯೋಗಗಳಾಗಿವೆ. ಭಾಸ ಮತ್ತು ಕಾಳಿದಾಸರ ಮೇಲೆ ಬೃಹತ್ತಾದ ವಿಮರ್ಶಾಗ್ರಂಥಗಳನ್ನು ಬರೆದಿದ್ದಾರೆ. ಗಾತ್ರ, ಪಾಂಡಿತ್ಯ ಎರಡು ದೃಷ್ಟಿಯಿಂದಲೂ ಇವರ ಕೃತಿಗಳು ಉನ್ನತ ಸ್ಥಾನವನ್ನು ಪಡೆದುಕೊಂಡಿವೆ.

	ಇವರು ಸಲ್ಲಿಸಿದ ಸಾಹಿತ್ಯಸೇವೆಯೂ ಗಣ್ಯವಾದುದು. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದ ಇವರು ಅದರ ಗೌರವ ಕಾರ್ಯದರ್ಶಿಯಾಗಿ (1930-37 ಹಾಗೂ 1938-40) ಸೇವೆ ಸಲ್ಲಿಸಿದರು.

	ಇವರು ಸಲ್ಲಿಸಿದ ಸಾಹಿತ್ಯ ಮತ್ತು ಸಮಾಜಸೇವೆಗೆ ಮನ್ನಣೆ ಎಂಬಂತೆ ಇವರಿಗೆ ಹಲವು ಬಗೆಯ ಗೌರವ, ಪ್ರಶಸ್ತಿಗಳು ಲಭಿಸಿವೆ. 1947ರಲ್ಲಿ ಹರಪನಹಳ್ಳಿಯಲ್ಲಿ ನಡೆದ 30ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. 1950ರಲ್ಲಿ ಮೈಸೂರರಸರು ಇವರಿಗೆ ರಾಜಸೇವಾಸಕ್ತ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. 1962ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತು. 1971ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂತು. ಅದೇ ವರ್ಷ ಕನಕಪುರದಲ್ಲಿ ನಡೆದ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು.  ತಮ್ಮ ಜೀವನದ ಕೊನೆಯ ದಿನಗಳನ್ನು ಚನ್ನಪಟ್ಟಣದಲ್ಲಿ ಕಳೆದ ಇವರು 1973 ಏಪ್ರಿಲ್ 3ರಂದು ಬೆಂಗಳೂರಿನಲ್ಲಿ ನಿಧನರಾದರು.
	(ಸಿ.ಕೆ.ಎನ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ